ಪಡುವಣದ ಶಿಖರ ಶೃಂಖಲೆಯೊಳು
ಆಗಂಬೆಯ ಮೇರು ತಾಣವದು
ನರಹರಿ ಮಡಿಲಿನ ಶಿಶುವೊಂದು
ಅಂಕುಡೊಂಕಿನ ದೂರ ಸವೆಸಿ ಬೆಳೆದಳು
ಅವಳೇ ನಲ್ಮೆಯ ಸೀತಾ...
ಧುಂಮ್ಮೆಂದು ಧುಮುಕಿ ಕಲ್ಲು ಬಂಡೆಗಳ ಚಚ್ಚಿ
ಮೈಯ್ದಡವಿಯೆದ್ದು ನುಸುಳುತ ಸಾಗಿದಳು
ಬಲಿತು ನೆರೆದವಳು ಪುನಃ ಸಣಕಲಾದಳು ಕಳೆಗುಂದಿ
ಕೂಡ್ಲು ಜೋಂಮ್ಳು ಬರ್‍ಕಾನಗಳಾರ್ಭಟವನು ತೊರೆಗಳ
ಜುಳುವಲಡಗಿಸಿದಳು
ಅವಳೇ ಒಲವಿನ ಸೀತಾ...
ಧಿಂಮ್ಮೆಂದು ಮತ್ತೆ ಪುಟಿದಳು ಹೊನಲಾಗಿ ಹರಿದಳು
ಹಸಿರ ತೋರಣ ಹಾಸಿದವಳು ಹೂಮಾಲೆ ಕಟ್ಟಿದಳು
ತನ್ನ ಒಡಲಲಿ ಪ್ರೀತಿ ಬಿತ್ತಿ ಉಸಿರುಗಳನು ಹಡೆದಳು
ಮರ್ಮವನರಿತವಳು ಕರ್ಮ ಕಳೆದು ಗಮ್ಯದಲ್ಲಿ ನಡೆದಳು
ಅವಳೇ ವಿಸ್ಮಯ ಸೀತಾ...
ಸೋಮೇಶ್ವರನ ಜಡೆಯಜಾರಿ ಕೃಷ್ಣನಾಡಿಗಿಳಿದು
ಹೆಬ್ರಿಯಲೋಲಾಡಿ ನೀಲಾವರದಲಿ ನಲಿದಾಡಿ
ನೂರಾರು ಮೈಲುದ್ದ ಬೆಳೆಪೈರನು ರಮಿಸಿದವಳು
ಅರಬ್ಬಿಯ ವಶವಾದಳೆ ಬೆಂಗ್ರೆಸುವರ್ಣಸಂಗಮದ ಕೋಡಿ
ಅವಳೇ ಸಾಹಸಿ ಸೀತಾ...
ಮುಂಗಾರಿನಲಿ ತುಂಬಿ ಚೆಲ್ಲಿದವಳೇ
ಆತಂಕ ತರುವವಳೇ, ಆದರೇನಂತೆ
ನನ್ನ ಸೀತಾ...ಅವಳೇ ನಲ್ಮೆಯ ಸೀತಾ...
ನನ್ನ ಸೀತಾ...ಅವಳೇ ಒಲವಿನ ಸೀತಾ...
ನನ್ನ ಸೀತಾ...ಅವಳೇ ವಿಸ್ಮಯ ಸೀತಾ...
ನನ್ನ ಸೀತಾ...ಅವಳೇ ಸಾಹಸಿ ಸೀತಾ...