ಶನಿವಾರ, ನವೆಂಬರ್ 25, 2023

ಸೀತಾನದಿ

ಪಡುವಣದ ಶಿಖರ ಶೃಂಖಲೆಯೊಳು
ಆಗಂಬೆಯ ಮೇರು ತಾಣವದು
ನರಹರಿ ಮಡಿಲಿನ ಶಿಶುವೊಂದು
ಅಂಕುಡೊಂಕಿನ ದೂರ ಸವೆ‌ಸಿ ಬೆಳೆದಳು
ಅವಳೇ ನಲ್ಮೆಯ ಸೀತಾ...

ಧುಂಮ್ಮೆಂದು ಧುಮುಕಿ ಕಲ್ಲು ಬಂಡೆಗಳ ಚಚ್ಚಿ
ಮೈಯ್ದಡವಿಯೆದ್ದು ನುಸುಳುತ ಸಾಗಿದಳು
ಬಲಿತು ನೆರೆದವಳು ಪುನಃ ಸಣಕಲಾದಳು ಕಳೆಗುಂದಿ
ಕೂಡ್ಲು ಜೋಂಮ್ಳು ಬರ್‍ಕಾನಗಳಾರ್ಭಟವನು ತೊರೆಗಳ 
ಜುಳುವಲಡಗಿಸಿದಳು
ಅವಳೇ ಒಲವಿನ ಸೀತಾ...
 
ಧಿಂಮ್ಮೆಂದು ಮತ್ತೆ ಪುಟಿದಳು ಹೊನಲಾಗಿ ಹರಿದಳು
ಹಸಿರ ತೋರಣ ಹಾಸಿದವಳು ಹೂಮಾಲೆ ಕಟ್ಟಿದಳು
ತನ್ನ ಒಡಲಲಿ ಪ್ರೀತಿ ಬಿತ್ತಿ ಉಸಿರುಗಳನು ಹಡೆದಳು
ಮರ್ಮವನರಿತವಳು ಕರ್ಮ ಕಳೆದು ಗಮ್ಯದಲ್ಲಿ ನಡೆದಳು
ಅವಳೇ ವಿಸ್ಮಯ ಸೀತಾ...

ಸೋಮೇಶ್ವರನ ಜಡೆಯಜಾರಿ ಕೃಷ್ಣನಾಡಿಗಿಳಿದು 
ಹೆಬ್ರಿಯಲೋಲಾಡಿ ನೀಲಾವರದಲಿ ನಲಿದಾಡಿ
ನೂರಾರು ಮೈಲುದ್ದ ಬೆಳೆಪೈರನು ರಮಿಸಿದವಳು
ಅರಬ್ಬಿಯ ವಶವಾದಳೆ ಬೆಂಗ್ರೆಸುವರ್ಣಸಂಗಮದ ಕೋಡಿ
ಅವಳೇ ಸಾಹಸಿ ಸೀತಾ...

ಮುಂಗಾರಿನಲಿ ತುಂಬಿ ಚೆಲ್ಲಿದವಳೇ 
ಆತಂಕ ತರುವವಳೇ, ಆದರೇನಂತೆ
ನನ್ನ ಸೀತಾ...ಅವಳೇ ನಲ್ಮೆಯ ಸೀತಾ...
ನನ್ನ ಸೀತಾ...ಅವಳೇ ಒಲವಿನ ಸೀತಾ...
ನನ್ನ ಸೀತಾ...ಅವಳೇ ವಿಸ್ಮಯ ಸೀತಾ...
ನನ್ನ ಸೀತಾ...ಅವಳೇ ಸಾಹಸಿ ಸೀತಾ...



ಹೊಸತು

ಗುರುವಾರ, ಮೇ 7, 2020

ಕರೋನ

ಹಮ್ಮು ಬಿಮ್ಮಿನ ಕನ್ನಡಿಯ ಪ್ರತಿಬಿಂಬ ಮಾನವ ಬದುಕು
ರಾಗ ದ್ವೇಷ ಬಯಕೆಗಳಲಿ‌ ಬೆಂದ ಸಂಕಟಗಳ ಗೊಜಲು
ಒಡೆದ ಹಾಲು ಹುಳಿಹಿಟ್ಟಂತೆ ಅಪ್ರಯೋಜಕ ತಿರುಳು
ಸ್ವಾರ್ಥ ಪ್ರೀತಿಯ ತೋರ್ಪಡಿಕೆಯ ಬಣ್ಣಗಳು
ಹಲವು ಬಿನ್ನಾಣಗಳ ಸಂಕೋಲೆ ಸರಮಾಲೆಗಳು




ಕೊನೆಯಿಲ್ಲದ ಕನಸುಗಳ ಬೆನ್ನೇರಿ ಓಡಿ ಓಡಿ ಸುಸ್ತಾಗಿತ್ತು
ರಣಕಲಿಯಂತೆ ವೈರಾಣು ಕರೋನ ದಾರಿಗಡ್ಡ ನಿಂತಿತ್ತು
ಆಸೆಗಳ ಗೋಪುರವನು ಕ್ಷಣಾರ್ಧದಲಿ ಕೆಡವಿತು
ನೋಡನೋಡುತ್ತಲೆ ಜೀವಕಳೆ ತೇಲಿಹೋಯ್ತು
ಪ್ರಾಪಂಚಿಕ ನಗ್ನಸತ್ಯ ಮತ್ತೊಮ್ಮೆ ಬೆತ್ತಲೆಯಾಯ್ತು

ದಾಂಗುಡಿ ಇಡುವ ಧಾವಂತದ ಬದುಕು
ಈಡೇರದ ಬಯಕೆಗಳ ಅನಂತತೆಯಲಿ ಸೆರೆಯಾಯಿತು
ಕಾಲಚಕ್ರದಡಿಯಲಿ ಸಿಲುಕಿ‌ ಹೆಣವಾಯಿತು
ವಿಶ್ಲೇಷಣೆಯ ಸಮಯ ಹುಲುಮಾನವಗೆ ಸ್ವಂತ ಅಸ್ಮಿತೆಯ ಕುರಿತು
ಬಂಧನ ಮೀರಿದ ಅದಮ್ಯ ಚೈತನ್ಯ ನಿರ್ಮಲ ಪ್ರೀತಿಯಲಡಗಿತ್ತು


ಶನಿವಾರ, ಡಿಸೆಂಬರ್ 9, 2017

ಕರುಣಿಸು ಓ ವೆಂಕಟ

ಭುವಿಯಲಿ ಹುಟ್ಟಬೇಕಂತೆ, ಎದೆ ಹಾಲು ಕುಡಿಯಬೇಕಂತೆ
ಅಮ್ಮನ ಮಡಿಲಲಿ ಮಲಗಬೇಕಂತೆ ಎಲ್ಲರು ಮುದ್ದಾಡಿಸುವರಂತೆ
ಬೇಡಲೋ ಬೇಡ ಈ ಸಂಕಟ ಕರುಣಿಸು ಓ ವೆಂಕಟ

ವಿದ್ಯೆ ಕಲಿಯಬೇಕಂತೆ ಆಚಾರ ತಿಳಿಯಬೇಕಂತೆ ಸಂಸ್ಕಾರ ಇರಬೇಕಂತೆ
ಹರೆಯ ಬರುವುದಂತೆ ಅರಸಿ ಅರಸುವರಂತೆ
ಬೇಡಲೋ ಬೇಡ ಈ ಸಂಕಟ ಕರುಣಿಸು ಓ ವೆಂಕಟ

ಮದುವೆ ಮಾಡಿಸುವರಂತೆ ಮಕ್ಕಳ ತಂದೆಯಾಗಬೇಕಂತೆ
ದುಡಿದು ಗಳಿಸಬೇಕಂತೆ ಪರಿವಾರ ಸಾಕಬೇಕಂತೆ
ಬೇಡಲೋ ಬೇಡ ಈ ಸಂಕಟ ಕರುಣಿಸು ಓ ವೆಂಕಟ

ಭವ ಬಂಧನದ ಯಾತ್ರೆ ಮುಗಿಸಿ ಹೋಗಬೇಕಂತೆ ವಾನಪ್ರಸ್ಥಕ್ಕೆ
ಅದಕ್ಕೇಕಿಷ್ಟು ರಾಮಾಯಣ ಇಗೋ ಇಲ್ಲೇ ಭವ ಬಂಧನ ಕಳಚಿಟ್ಟೆ
ಇರದು ತಕರಾರು ಮೊದಲಡಗಿಸು ನನ್ನಸ್ತಿತ್ವ ಮತ್ತೆ ಹೇರು ಹೆಗಲಿಗೆ ನಿನ್ನಭಿಲಾಷೆಯ ನೊಗ
ಓ ವೆಂಕಟ ಪರಿಹರಿಸು ಸಂಕಟ















ಜುಮ್ಮಾಯಿತು

ಕಳೆದ್ಹೋಗಿದೆ ವಿಳಾಸ ನಾನ್ಯಾರೆಂದು ಮರೆತು ಹೋಗಿದೆ
ನೋಟದಲಿ ಮೊದಲಸಲ ಕಲೆತಾಗ ನೋಟ... ಜುಮ್ಮಾಯಿತು

ನನ್ನಭಿಮಾನವನು ಮಣ್ಣು ಮಾಡಿ ಸಾಲದೆ ಪರಿಚಯವನು ಕದ್ದು ಹೋದೆ
ಎಲ್ಲಾ ಕಳೆದರೂ ಸುಖವಿದೆ ನಿನ್ನ ನೆನಪೊಂದೆ ಉಳಿದು.... ಜುಮ್ಮಾಯಿತು














ಅಂದು ಬೆಳದಿಂಗಳ ರಾತ್ರಿ ಆ ಮಲ್ಲಿಗೆ ತೋಟದಲಿ ಘನಮಾನವನು ದೋಚಿದೆ
ಅಲ್ಲಿ ಬಳಕುತ ಬಂದು ಚಂದ್ರನ ಬೆಳಕನು ಹೊದ್ದು ಆಡಿದೆ ಮಾಯದ ಆಟ ... ಜುಮ್ಮಾಯಿತು

ಮದ್ಯದಲಿ ನಶೆಯಿಲ್ಲ  ನಿದ್ದೆಯ ಸುಳಿವಿಲ್ಲ ನೀಗದ ಬೇಗುದಿ ಸಂಭೋಗಕೆ
ಬಾ ನಲ್ಲೆ ಬಂದು ಇನ್ನೊಮ್ಮೆ ದೋಚು ಎಲ್ಲವನು..ಹಾ ಈ ಯಾತನಾಮೋಹ ... ಜುಮ್ಮಾಯಿತು

ಲೋಕದ ವೃಥಾಚಿಂತೆ ಕಾಣದಾಯಿತು ಅವನ್ಯಾರೋ ಇವನ್ಯಾರೋ ಈಗಿನ್ನೇಕೆ?
ಪರದೆ ಹರಿದಾಗ ನನಗೂ ನಿನಗೂ ಉಳಿದುದೊಂದೇ ಪರಿಚಯ... ಜುಮ್ಮಾಯಿತೋ... ಜುಮ್ಮಾಯಿತು. 

ಗುರುವಾರ, ನವೆಂಬರ್ 19, 2015

ನಿರ್ಲಿಪ್ತ ಮೌನ

ಅದೇಕೆ? ನಿರ್ಲಿಪ್ತ ಮೌನವೇಕೆ?
ಈ ಪರಿಯ ಪರೀಕ್ಷೆಯೇಕೆ?
ಹೃದಯ ಬೇಗುದಿಯ ಹೊಯ್ದಿಹೆ ಚರಣಕೆ
ಪರಿಹಾರ ಉಪಚಾರ ಕಾಣದೆ

ಉತ್ತರವಿಲ್ಲ ಸುಳುಹು ಸೂಚನೆಯಿಲ್ಲ
ತತ್ತರಿಸಿದೆ ಅರಿತು ನಾಳೆ ಅಗೋಚರ
ಅಯ್ಯಾ ನಿನ್ನ ಮೌನ, ನಿರ್ಲಿಪ್ತ ಮೌನ
ಮರಣದಷ್ಟು ಘೋರ...

ದಾರಿತೋರು ನಿನ್ನಡಗುದಾಣಕೆ
ತೊಡಗಿರುವೆ ಹುಡುಕಲೀಗೀಗ
ಕತ್ತಲೆಯಲಿ ಚಲಿಸಿ ಯಾಮಾರಿದೆ
ಬೆಳಗಿಸು ಓಜಸ್ವಿ ಕಿರಣಗಳನೀಗ

ಸೋಲುತಿರುವೆನೇನೋ ಹುಡುಕಾಟದಲಿ?
ಇಲ್ಲಾ ಮರುಳನಾದೆನೋ ನಾನಾರೆಂದು
ತಿಳಿಯದೆ ಹೊರಟೆ ನಿನ್ನನರಿಯಲು
ಏನಿದರ ಮರ್ಮ? ಶ್ರುತಪಡಿಸು

ಸರಿಸು ಮಾಯದಾ ತೋರಣವ
ತೆರೆಸು ಕಣ್ಣ ಕಾಣುಲು ನನ್ನನು
ನಿನ್ನಲಿ ಕರಗಿ ನಾನೀನಾಗಿ
ಚಿರಂತರ ಚಿನ್ಮಯ ಅಲೆಯಾಗಲು



Whispers of Stolen Identities

In the dance of glances, a meeting divine, A thrill coursing through like sweet-aged wine. Dignity lost, identity taken away, Yet joy persis...