ಶನಿವಾರ, ನವೆಂಬರ್ 6, 2010

ಮುಂಜಾನೆ ಹೋಳಿ

ಮುಂಜಾನೆ ಹೋಳಿ ಅಂಬರ ತುಂಬಿತು
ಬಣ್ಣದ ಮೆರುಗು ಸೊಬಗ ತದಿಂತು
ಮೂಡಣ ರವಿಯು ನಡುವಲಿ ನಕ್ಕಾಗ
ಚಿಲಿಪಿಲಿ ಪಕ್ಕಿ ಬಾನಿಗೆ ನೆಗೆದಾವು (ಪಲ್ಲವಿ)

ಅಂಗಳದಲಿ ರಂಗೋಲಿ ರಂಗು
ಗುಡ್ದದ ಗುಡಿಯಲಿ ಘಂಟೆಯ ಸದ್ದು
ಭಕ್ತಿಯ ಆರತಿ ಭಾಗ್ಯದ ತುಳಸಿಗೆ
ಲೋಕದ ಲಾಲನೆ ಉದಯದ ಉಗಮಕೆ

ತರುಲತೆಗಳ ಹೊಕ್ಕ ಕಿರಣವು
ಕಿಟಕಿಯ ತೂರಿ ಒಳಗಡಿ ಇಟ್ಟಿತು
ಪಸರಿತು ಗಾಳಿಗೆ ಹೂಗಳ ಕಂಪು
ಮನೆಯೊಳಗೆಲ್ಲಾ ಆನಂದ ತಂತು

ಹಳ್ಳಿಯ ಹೆಣ್ಣು ಸೇಬು ಹಣ್ಣು
ಬಿಂದಿಗೆ ಹಿಡಿದು ನೀರಿಗೆ ಹೊರಟಳು
ಗೆಜ್ಜೆಯ ಝಲ್ ಝಲ್ ನಾದವು ಕೇಳಲು
ಬೀದೀಲಿ ಹೈದರು ಕಣ್ ಕಣ್ ಬಿಟ್ಟರು

ರೈತಯೋಗಿಯ ಶ್ರಮೆಯನು ಉಂಡು
ದಣಿಯದೆ ದುಡಿಯುವ ಯುವಕರ ದಂಡು
ಶಾಲೆಗೆ ತೆರಳುವ ಮಕ್ಕಳ ಹಿಂಡು
ಹಿಗ್ಗುವ ಹಿರಿಯರು ಭವಿಷ್ಯವ ಕಂಡು

ಸೋಮವಾರ, ನವೆಂಬರ್ 1, 2010

ನಿಯಮ




ಸೃಷ್ಟಿ ವೈಚಿತ್ರ್ಯ ನಿಯಮ
ಸೃಷ್ಟಿ ವೈವಿಧ್ಯ ನಿಯಮ
ತರ್ಕ ನಿಲುಕದ ನಿಯಮ
ಆಧ್ಯಾತ್ಮಕೆ ಪ್ರೇರಣೆ ನಿಯಮ

ಪರಮಾತ್ಮನಲ್ಲಿನ ನಿಯಮ
ಪರಮಾತ್ಮನ ನಿಯಮ
ಪರಮಾತ್ಮನೆ ನಿಯಮ
ಪಂಚಭೂತದಲಿ ಲೀನ ನಿಯಮ


ಜೀವಸಂಕುಲಗಳ ಸೃಷ್ಟಿಸೋ ನಿಯಮ
ಗಗನಮಂಡಲ ವೈಭವತೆಯ ನಿಯಮ
ತೆರೆ ಅಬ್ಬರದ ಶರಧಿಯಲಿ ನಿಯಮ
ಧುಮುಕೋ ಜಲಪಾತದಲಿ ನಿಯಮ

ಋತುಚಕ್ರಗಳೆಂಬ ನಿಯಮ
ಅತಿವೃಷ್ಟಿಯ ತಂದ ನಿಯಮ
ಅನಾವೃಷ್ಟಿಯೊಳು ಕಂಡ ನಿಯಮ
ಸರ್ವತ್ರ ವ್ಯಾಪ್ತ ನಿಯಮ

ಲೋಕ ಪರಿಪಾಲಿಸುವ ನಿಯಮ
ನ್ಯಾಯನೀತಿಯ ಮುಂದೆ ನಿಯಮ
ಅನೀತಿ ಅನಾಚಾರಗಳ ಹಿಂದೆ ನಿಯಮ
ಮನುಜ ನಾಗರಿಕತೆಗೆ ಸಂಕೇತ ನಿಯಮ

ಸುಖ ಸಮೃದ್ಧಿಗೆ ಕಾರಣ ನಿಯಮ
ದಟ್ಟದಾರಿದ್ರ್ಯವನು ತರುವ ನಿಯಮ
ಆರೋಗ್ಯಭಾಗ್ಯ ಕೊಡುವ ನಿಯಮ
ಪೀಡೆ-ಪಿಶಾಚವೆನುವ ಹೆಸರಿನ ನಿಯಮ

ಶಿಷ್ಟ ಸೋತ ನಿಯಮ
ದುರುಳ ಗೆದ್ದ ನಿಯಮ
ಅಂತಃಕಲಹ, ರಾಜಿಯ ನಿಯಮ
ಬದುಕಲಿ ಸಮರಸ ಸಾಧಿಸುವ ನಿಯಮ

ಮಂಗಳವಾರ, ಸೆಪ್ಟೆಂಬರ್ 14, 2010

ಅವುಚಿ ಅವುಚಿ

ಅವನು>        ಅವುಚಿ ಅವುಚಿ ಎದೆಗವುಚಿ
                    ತಬ್ಬಲು ಮೇಲೆ ಬಿದ್ದು ಕವಿಚಿ
                    ಅಯ್ಯೋ ಏನೋ ವೇದನೆ ಸಂ..ವೇದನೆ
                    ನಿನ್ನ ಕೋಮಲ ಮೈ ತಾಕಲು ಲಲನೆ  

ಅವಳು>        ಚೆಲುವ, ಹೃದಯ ಕರೆಯಿತು
                    ಬಾ ಎಂದು ಪ್ರೀತಿ ಮಾಡಲು
                    ದೂರವಿದ್ದರೂ ಪ್ರೀತಿಕರೆ ಕೇಳಿ
                    ಓಡೋಡಿ ಬಂದೆ ಸೇರಲು

ಅವನು>        ನಿನ್ನಿರುವಿಕೆ ಗಮನಿಸಲು
                    ಮೈಯೆಲ್ಲಾ ಕಣ್ಣಾಗಿಸುವೆ
                    ನಿನ್ನಂತರಂಗ ದನಿ ಕೇಳಲು
                    ಮನಸ್ಸು ಕಿವಿಯಾಗಿಸುವೆ


ಅವಳು>       ಹೃದಯ ಮಾತಾಡಲು
                  ಎಲ್ಲಿಯ ದೂರ? ಎಲ್ಲಿಯ ವಿರಹ?
                  ನಾವೆಂದಿಗೂ ತೀರ ತೀರ ಹತ್ತಿರ
                  ಪ್ರೀತಿ ಮನಕೆ ಎಲ್ಲಿಯ ಅಂತರ?

ಅವನು>      ಸಂತೆ ಬೀದಿಯ ಗದ್ದಲದಲೂ
                  ಪ್ರೇಮ ಸಲ್ಲಾಪ ಕೇಳಬಲ್ಲೆ!
                  ಊರ ತೇರ ಜಾತ್ರೆಯಲೂ
                  ದೃಷ್ಟಿಯಂಚಲೆ ಹುಡುಕಬಲ್ಲೆ!

ಅವಳು>      ಇನಿಯನನೆ ಮನೆಯ ಮಾಡಿ
                  ಮನೆಯಲ್ಲಿ ವಾಸ ಮಾಡಿದೆ
                  ನನ್ನನ್ನೆ ಮನೆಮಾಡಿ ಇನಿಯನ ಕರೆದೆ
                  ನಾನೆಲ್ಲಿ? ಮನೆಯೆಲ್ಲಿ? ಇನಿಯನೆಲ್ಲಿ?
                                                 ಇಲ್ಲಿ ಎಲ್ಲಾ ಒಂದೇನೆ..

ಗುರುವಾರ, ಸೆಪ್ಟೆಂಬರ್ 9, 2010

ನನಗೇನಾಗಿದೆ?

ನನಗೇನಾಗಿದೆ ಈಗೀಗ ತಿಳಿಯದಾಗಿದೆ
ಅವಳ ಪ್ರೀತಿ ವಶೀಕರಿಸಿದೆ
ನಿಗ್ರಹ ಮನಸಿನ ಪೊರೆಕಳಚಿದೆ
ಬಯಕೆ ಹೃದಯದಲಿ ತುಂಬಿ ತುಳುಕಿದೆ
ಬೇಡೆನಿಸಿದೆ ಬಿಡುಗಡೆ ಪ್ರೇಮ ಸಮ್ಮೋಹನದಿಂದೆ

ತುಂಟತನ ಕುಡಿ ನೋಟದಲಿ
ತುಸು ನಾಚಿಕೆ ನಸು ನಗುವಲಿ
ತಿಮಿರ ಮಾಯೆ, ಕೇಶರಾಶಿಯಲಿ
ಮೊನಚು ಸೆಳೆತ ಕೆನ್ನೆ ಗುಳಿಯಲಿ
ಮಿಂಚ ಹೊಳಪು ಮುಖಕಾಂತಿಯಲಿ


ಕುಂಚ ಸಾಲದು ಬಣ್ಣಿಗೆಗೆ ನಾ ಹೇಗೆ ಬರೆಯಲಿ

ರಹಸ್ಶವದು ಎದೆಯಲ್ಲೆ ಅವಿತಿತ್ತು
ಹೇಳದೆ ನಾನವಳ ಪ್ರೇಮಿಯೆಂದು
ತುಟಿ ಒಣಗಿತು, ಮಾತು ಹುದುಗಿತು
ಎದುರು ನಿಂತಾಗ ಅವಳು
ಹೃದಯ ದುರ್ಬಲ ಪ್ರೀತಿಯೊಳು 
ಹೀಗೂ ಆಗುವುದೊ ತಿಳಿಯೆ ಪ್ರೇಮದೊಳು

ಆತುರಗೊಂಡೆ ಸ್ಪರ್ಶಿಸಲವಳನು
ಲೋಕದಲಿ ತುಂಬಿದವಳ ಬಿಂಬವನು
ಹರಿವ ನದಿ ಅವಳು ನಡೆದ ಹಾದಿಯು
ಬೀಸೊ ಗಾಳಿ ಅವಳಂತರ್ಯ ಗಾನವು
ಸಾಗೋ ಮೇಘದಲವಳ ಉತ್ಸವಜಾತ್ರೆಯು
ಹರಡಿದೆ ಅವಳ ಚೈತನ್ಯ ಎಲ್ಲೆಲ್ಲೂ, ನನ್ನಲ್ಲೂ.

ಹರೆಯ ಬಂತು.... ಹರೆಯ

ಹರೆಯ ಬಂತು.... ಹರೆಯ
ಅರಿವಿಗೆ ಬಾರದೆ ಗೆಳೆಯ

ಹೂ ಅರಳಿದ ಮನಸು
ಕ಼ಣ ಕ಼ಣ ಹೊಸಬಗೆ ಕನಸು
ತುಂಬಿದೆ ಬದುಕಲಿ ಸೊಗಸು
ನನಗೀಗ ಹರೆಯದ ವಯಸು

ಗಗನ ಗಣಿಸುವ, ಕಡಲ ಕಡೆಯುವ
ಅಸಾಧ್ಯ ಸಾಧಿಸುವ ತವಕ
ಕೂಡಿ ಕೂಡಾಡಿ, ಪ್ರೀತಿ ಹರಿದಾಡಿ
ಒಲ್ಮೆ ಮೈನೆರೆತ ಬಗೆ ಮೋಹಕ

ಪ್ರೀತಿ ಅರಸಿ, ಪ್ರೇಮ ಬಯಸಿ
ಕನಸು ಕಲ್ಪನೆಗಳ ಹೊಸೆವ ಪರಿ ಅನೂಹ್ಯ
ಏಕಾಂತ ಹುಡುಕುವ, ಸಂಗಾತಿ ಹಾತೊರೆವ
ಮನದ ತೊಳಲಾಟಗಳ ವೈಶಿಷ್ಟ್ಯ

ಕರೆಯ ಕೇಳುತ ಅಭಯ ಕರವ ಚಾಚಿದ
ನಿಜ ಗೆಳೆಯನ ಗೆಳೆತನ  ಮರೆಯಲಾದಿತೆ?
ನೋವ ನೆನೆಯದೆ ಸುಖ ಸವಿದು
ಬದುಕಲು ಕಲಿಸಿದ ಹರೆಯ ತೊರೆಯಲಾದಿತೆ?

ತೊರೆದು ಮರೆಯಲಾದಿತೆ?

ರಹಸ್ಯ ಸೌಂದರ್ಯ

ರಹಸ್ಯ ಸೌಂದರ್ಯದ ಗಣಿಯವಳು
ಸೊಬಗ ಮೀರಿದ ಸೊಬಗವಳು
ಚಿನ್ನ ಬಣ್ಣದ ಮೆರುಗಿಲ್ಲದ
ನಿರಾಭರಣ ಕಾಂತಿಯವಳು

ರವಿ  ನಸುಕ ಮುಸುಕಲಿಳಿದ
ಶಶಿ ಅವಿತ ಮೇಘದಲಿ
ಯಾರು ಸಲ್ಲರು ಕ್ಷಣ ಕಳೆಯಲು?
ಮಾಯಾಂಗನೆಯ ಜೊತೆಯಲಿ

ತ್ರಿಲೋಕ ಸಾರಿದವಳ
ಬೆಡಗಿನ ವರ್ತಮಾನಕೆ
ಸ್ವರ್ಗಗಣ ಒಗ್ಗೂಡಿ
ಅವತರಿಸಿತು ಧರೆಗೆ

ಅಪ್ಸರೆಯರು ಹಿಂಜರಿದರು
ಅಮೋಘ ಅಂದದ ಮುಂದೆ
ಈರ್ಷೆಯಲಿರಲು ಸುರಸುಂದರಿಯರು
ಬ್ರಹ್ಮ ಮೈಮರೆತ ಸ್ವಂತ ಕೈಚಳಕಕೆ

ಕಂಡಿಲ್ಲ ಈಪರಿಯ ಲಾವಣ್ಯವನೆಂದು 
ಉಲಿಯುತಿರೆ ಮರ್ಮವನರಿಯದೆ
ನಾಕಜನ ಮೂಕವಾಯ್ತು
ಆ ವಿಸ್ಮಯ ಚುಂಬಕ ಚೆಲುವಿಗೆ

ಸಂತೆಗೆ ಬರ್ತಿತಾನೆ?

ಕೆಳೇ ಪೋರಿ ಚೋರಿಚಕೋರಿ
ಸೋಮವಾರ ಸಂತೆಗೆ ಬರ್ತಿತಾನೆ
ಜೋಡಿ ಎತ್ತ ಬಂಡಿಗೆ ಕಟ್ತೀನಿ
ಜೊತೆಗೆ ಹೋಗುವಾ ಇರ್ತಿತಾನೆ

ಕಿವಿಗೆ ಓಲೆ ಹವಳದ್ ಸರ
ಕೈಗೆ ಬಳೆ ತೊಡಿಸ್ತೀನಿ
ಸಂತೆ ಸುತ್ತಿ ಅತ್ತ ಇತ್ತ
ಮೊಲ್ಲೆ ಹೂವ ಮುಡಿಸ್ತೀನಿ

ಮನೆಗೆ ದಿನಸು ರೇಷ್ಮೆ ದಿರಸು
ಚಿಟ್ಟೆ ಬೆಲ್ಲ ಕೊಡಿಸ್ತೀನಿ
ಪಕ್ಕದ್ ಟಾಕೀಸಲ್ಲಿ ಒಟ್ಟಿಗ್ ಕೂತು
ಅಣ್ಣಾವ್ರಾ ಸಿನೇಮಾ ತೋರಿಸ್ತೀನಿ

ರಾಂಪನ ಹೋಟಲ್ನಲ್ಲಿ ನಿನಗೆ
ಬೆಣ್ಣೆ ದೋಸೆ ತಿನ್ನಿಸ್ತೀನಿ
ವಾಪಾಸ್ ಬರ್ತಾ ಗುಡಿಯೊಳಗೆ
ಗಣಪತಿ ದರ್ಶನ ಮಾಡಿಸ್ತೀನಿ

ಕೆಳೇ ಪೋರಿ ಚೋರಿಚಕೋರಿ
ಸೋಮವಾರ ಸಂತೆಗೆ ಬರ್ತಿತಾನೆ

ಸುಗ್ಗಿಯ ಸಂಭ್ರಮ

ಹೆಜ್ಜೆಗೆ ಹೆಜ್ಜೆ ಸೇರಿಸಿ ಕೈಯಲ್ಲಿ ಕೈಹಿಡಿದು
ಲಗುಬಗೆಯಿಂದ ಬನ್ನಿ ಎಲ್ಲರೂ
ಕೂಡಿಕುಣಿಯಲು ಸಂತಸ ಪಡೆಯಲು
ಸುಗ್ಗಿಯ ಸಂಭ್ರಮವಿದೋ ಸುಗ್ಗಿಯ ಸಂಭ್ರಮ

ಗದ್ದೆ ಅಂಗಣ ಮಧ್ಯದಲಿ ಕಟ್ಟಿಗೆ ಬೆಂಕಿಯುರಿಯುತಿದೆ
ಅಮಲು ಮಂದಿಯ ಮೊರೆತದಿ ಮದಿರಾ ಮೆರೆಯುತಿದೆ
ಹಬ್ಬದಾನಂದದ ಚಂದಕಾಣಲು ಚಂದ್ರಚಾರಣವಾಗಿದೆ
ಕುಣಿಯೋ ರೈತ ಕುಣಿಯೋ ಹೆಜ್ಜೆ ಹಾಕಿ ಕುಣಿಯೋ
ಸುಗ್ಗಿಯ ಸಂಭ್ರಮವಿದೋ ಸುಗ್ಗಿಯ ಸಂಭ್ರಮ

ಕಳೆಕಡ್ಡಿ ಹೊಳ್ಳುಹೊಟ್ಟ ದೂರತೂರಿ
ಉತ್ತಮ ಫಸಲನು ಆರಿಸಿ ತೆಗೆದೆವು
ಆಲಸ್ಯ ಸರಿಸಿ ಕಾಯಕ ಮುಂದುವರೆಸಿ
ರಾಶಿರಾಶಿ ಧಾನ್ಯವ ದಾಸ್ತಾನು ತುಂಬಿದೆವು
ಕುಣಿಯೋ ರೈತ ಕುಣಿಯೋ ಹೆಜ್ಜೆ ಹಾಕಿ ಕುಣಿಯೋ
ಸುಗ್ಗಿಯ ಸಂಭ್ರಮವಿದೋ ಸುಗ್ಗಿಯ ಸಂಭ್ರಮ

ಉಳಿಸಿ ಬೇಕಾದಷ್ಟು ಉಳಿದದ್ದು ವ್ಯಾಪಾರಕ್ಕೆ
ಗಳಿಕೆ ಅಷ್ಟಿಷ್ಟು ಸಾಲುವಷ್ಟು ವರುಷಕ್ಕೆ
ನಮಗಿಲ್ಲ ಅತಿಯಾಸೆ ಕೂಡಿಡಲು ಕಂತೆಕಂತೆ
ಸಾಗಲಿ ಸಂತೃಪ್ತ ಬದುಕು ಹೀಗೆ ಎಂದಿನಂತೆ <ಕುಣಿಯೋ ರೈತ ಕುಣಿಯೋ....... >

ಸ್ವಾರ್ಥ ಮನಸಿನ ಗೋಡೆಕೆಡವುತ
ಮತಪಂಥಗಳ ಮೌಢ್ಯ ತೊರೆಯುತ ಬನ್ನಿ
ಮನುಜ ಮತದ ಸತ್ವಸಾರುತ
ಮಾನವತೆಯ ಹಾಡುಹಾಡುತ ಬನ್ನಿ <ಕುಣಿಯೋ ರೈತ ಕುಣಿಯೋ .....>

ಆಸೆ

ಕಾಮನಬಿಲ್ಲಾ ಮೇಲೆ ಉಯ್ಯಾಲೆ ಆಡುವ ಆಸೆ
ಏಳು ಬಣ್ಣಗಳ ಮೈಯಲ್ಲಿ ಹೊದ್ದುಕೊಳ್ಳೋ ಆಸೆ
ಚಂದಿರನ ಹಾಲ್ಬೆಳಕಲಿ ಜಳಕಮಾಡೋ ಆಸೆ
ತಾರೆಗಳ ಸೇರಿಸಿ ರಂಗೋಲಿ ಬರೆಯೋ ಆಸೆ

ಗಾಳಿಯ ಹಿಡಿದು ನಿಲ್ಲಿಸೋ ಆಸೆ
ಗಗನ ಹಾಸನು ಸುರುಳಿ ಸುತ್ತೋ ಆಸೆ
ಮೇಘಮಾಲೆಯ ಕೊರಳಲಿ ಧರಿಸೋ ಆಸೆ
ಏಣಿ ಇಟ್ಟು ಸೂರ್ಯನ ಮುಟ್ಟುವ ಆಸೆ

ಹಸಿದ ಹೆಬ್ಬುಲಿಯ ದವಡೆ ಕೀಳೋ ಆಸೆ
ಓಡೋ ಕುದುರೆಯ ವೇಗ ಮುರಿಯೋ ಆಸೆ
ಬೆಂಕಿಕೆನ್ನಾಲಿಗೆಯ ಆಸನದಲಿ ವಿರಮಿಸೋ ಆಸೆ
ಹೂವಾಗಿ ಅರಳಿ ದುಂಬಿಯ ಚುಂಬಿಸೋ ಆಸೆ

ತೆರೆತೆರೆಯಲ್ಲೊಂದಾಗಿ ತಡಿಯ ತೀಡುವ ಆಸೆ
ಕುಡಿದ ಗುಟುಕಲಿ ಕಡಲ ಬತ್ತಿಸೋ ಆಸೆ
ವಸುಂಧರೆಯ ಹೊತ್ತು ನಡೆಯೋ ಆಸೆ
ಬಾನ ಹಲಗೆಯಲಿ ಜೀವಕುಲಕೆ ಕನ್ನಡ ಕಲಿಸೋ ಆಸೆ

ಆಸೆಗಳ ಬೆನ್ಹತ್ತಿ ಹೋಗುವ ಆಸೆ
ಹಳೆ ಆಸೆಗಳ ತೀರಿಸೋ ಆಸೆ
ಹೊಸ ಆಸೆಗಳ ಸೇರಿಸೋ ಆಸೆ
ಆಸೆಗಳಲೆ ಬದುಕುವ ಆಸೆ

ನಾಗರಿಕರ ಮಹಾ ನಗರವಿದು

ನಗರವಿದು ನಗರವಿದು
ನಾಗರಿಕರ ಮಹಾ ನಗರವಿದು

ಎತ್ತರ ಎತ್ತೆತ್ತರ
ಗಗನಚುಂಬಿ ಕಟ್ಟಡ
ಭೂಮಿಗೆತ್ತರ ನಭಕೆ ಹತ್ತಿರ
ಮನಸುಗಳ ನಡುವಿನಂತರ

ಪರಿಶ್ರಮ ಅನವರತ
ಕೂಡಿಡಲು ಧನಕನಕ
ಬದುಕು ಯಾಂತ್ರಿಕ
ಮಾನವ ವಂಚಕ

ಸ್ವಾರ್ಥ ಜಗದ ಪರಿಭಾಷೆ
ಹೃದಯ ತುಂಬಿರಲು ನಿಶೆ
ಮಾತು ಶರಣು ಮೌನಕೆ
ಮಾನವತೆ ಹೆಸರಿಗೆ

ಹೋರಾಟ ಮಾಡನು
ಅನ್ಯಾಯ ಎದುರಿಸನು
ಹಕ್ಕುಭಾದ್ಯತೆ ತಿಳಿಯನು
ಗೊಡವೆ ನನಗ್ಯಾಕೆನುವನು

ಅರಿಯದೆ ನೆರೆಯವರ
ಊರ ಪರಊರವರ
ಹೊಂದುವ ಅವನತಿಯ
ಕಾಣದೆ ಶಾಂತಿ ನೆಮ್ಮದಿಯ

ಬಾರೋ ರತಿಪನೆ ಬಾರೋ

ಬಾರೋ ರತಿಪನೆ ಬಾರೋ
ರಹರಹಿಸಲು, ರಸಹಿಂಡಲು
ಶಯನ ಮಂಚಕೆ ಬಾರೋ
ಮೋಹದ ಒಡತಿಯ ಕಾಡಲು

ನೋಡೋ ಕನಸಿನ ಮಲ್ಲಿ
ನವ ಯೌವನದ ಮೈಸಿರಿಯಲ್ಲಿ
ಸವಿಯೋ ಶೃಂಗಾರದೌತಣ
ನಾಟಿ ಕಣ್ ಬಾಣ ಎದೆಯಲ್ಲಿ

ನಿತ್ಯ ಜಂಜಾಟದ ಗೋಳು ತೆಗೆಡಿಡು
ಪ್ರಾಯವಿರಲು ಮಾಡು ಮೋಜು
ವ್ಯಥೆ ಚಿಂತೆಯ ಬದುಕಿದು
ಮರೆ ಈಹೊತ್ತು ನಶೆಯಲಿ ಕಳೆದು

ಕೊಬ್ಬಿದ ಚಿರತೆಯೊಂದು ಹಸಿದಿರಲು
ಬೇಟೆಗೆ ಹೊಂಚು ಹಾಕದೆ?
ಚೆಂದದ ಹರಿಣಿ ವೈಯಾರದಲಿರಲು
ಹಾರಿ ಮೇಲೆ ಎರಗದೆ?

ಒಂದಾಗುವ ಅಪೂರ್ವ ವೇಳೆಯಿದು
ಬಾರೋ ಹೃದಯವಂತನೇ
ಕಾಮಕದನದ ಯಾತ್ರೆಯಿದು
ಏರೋ ಪ್ರಣಯ ರಥವನೇ

ಸ್ಪರ್ಶ ಚುಂಬನ ಕಂಪನಾವೇಶ
ಹಂಬಲಾದಿಗಳ ಮಿಲನ ಪರ್ವಕೆ ಬಾರೋ
ನಗ್ನತನುಮನ ಸರಸಸ್ವರ ಸಲ್ಲಾಪರಾಗ
ಹಲವು ಭಾವ ತುಮುಲ ರಂಗಲಿ ಸೇರೋ


ಬೆತ್ತಲ ಮಲೆಯ ಎತ್ತರ ಮೋಹ
ಆಳಕ್ಕಾಳಕ್ಕಿಳಿದು ಪ್ರೀತಿ ಅಳೆಯೋ
ಕಾದ ಕಣಿವೆಯಲಿ ಒರತೆ ಜಿನುಗಿಸಿ
ಬಿಸಿಯ ನೀಗೋ, ಆಸೆಯ ತಣೆಸೋ.

ಪಾರಿವಾಳನಾನಾಗಿರಲು

ಎಷ್ಟು ಚೆನ್ನಾಗಿರೆ!
ಪಾರಿವಾಳನಾನಾಗಿರಲು
ಮನೆಮಹಡಿಯ ಮೇಲೆ
ಬಿಡಾರ ಹೂಡಲು
ಅನುಮತಿ ಕಾಯದೆ
ಕಿಟಕಿಯ ಇಣುಕಲು
ಮಂಚದಲ್ಲಿ ಮೈಚೆಲ್ಲಿದ ನಿನ್ನ
ಚೆಲುವ ಕಣ್ತುಂಬಲು.

ತವಕ ನನಗೆ ನೋಡಲು ದಿನಾ ದಿನಾ
ಅನುದಿನವು ಜೊತೆಯಲ್ಲಿದ್ದರೆ ಎಷ್ಟು ಚೆನ್ನ!
ನಾನೆನಾಗಲಿ ಸದಾ ಒಡನಾಡಿಯಾಗಿರಲು ನಿನ್ನ?

ಮುಡಿಯೇರುವ ಹೂವಾಗಲೆ?
ಹಣೆಮೇಲಿನ ಬಿಂದುವಾಗಲೆ?
ಕಣ್ರೆಪ್ಪೆಯ ಕಾಡಿಗೆಯಾಗಲೆ?
ತುಟಿ ಕೆಂಪು ರಂಗಾಗಲೆ?
ಕೆನ್ನೆ ಮುತ್ತಾಗಲೆ?
ತನು ಸೌಗಂದವಾಗಿ ಹೊಮ್ಮಲೇ?
ಮಳೆ-ಮೋಡ ಕಲೆತಂತೆ ಕಲೆಯಲೆ?
ನಿನ್ನನುರಾಗ ತಂಪಲಿ ನೀರಾಗಿ ಸುರಿಯಲೆ?

ಹೃದಯ ಕೊಡು ಹೃದಯ ಕೊಡು

ಹೃದಯ ಕೊಡು ಹೃದಯ ಕೊಡು
ಓ ಹೆಣ್ಣೇ....ಕನ್ನಡ ಮಣ್ಣಿನ ಕುಲಹೆಣ್ಣೇ..

ಯಾಕೆ ಇಂಥ ಬಿಗುಮಾನ?
ಸಾಕು ಮಾಡು ಬಿನ್ನಾಣ
ಸಾಟಿ ಯಾರು ನಿನಗೆ ಬೇರೆ?
ಮೋಹನಾಂಗಿ ತಿಳಿಯೆ ನಿಜವ

ಪ್ರೇಮಿ ನಾನು ನಿನ್ನವನೆ
ಮನದ ಮಾತ ತಿಳಿಸುವೆ ಬಾ
ಸೆಳೆವ ಹೊನ್ನ ಪೌರ್ಣಿಮೆಯೆ
ಬಯಕೆ ಬಯಸಿದೆ ಸನಿಹಕೆ ಬಾ

ಹುಡುಕುವೆ ಎಲ್ಲೆಲ್ಲಿ ಏಕೆ?
ನನ್ನ ಮನಸು ನಿನ್ನಲ್ಲಿರಲು
ಕಾಣುವೆ ಮನಸ ಪರದೆಯೊಳು
ಹೃದಯ ತೆರೆದು ಒಮ್ಮೆ ನೋಡು

ಬಾಳ ಲಯಕೆ ತಾಳವಾಗು
ಒಲವ ಚಿಲುಮೆ ಉಕ್ಕುವ ಧಾರೆ
ಪ್ರೀತಿ ಪ್ರಣಯದ ತಾರಿಣಿ
ಅಮರ ಪ್ರೇಮದ ಅಭಿಸಾರಿಕೆ







ಕಣ್ ಕಣ್ಣೋಟಗಳ ಮಿಳಿತ

ಕಣ್ ಕಣ್ಣೋಟಗಳ ಮಿಳಿತ
ಮೈಮನಸಲೆನೋ ಪುಳಕ
ಎದೆಯೊಳಗೆ ತಿಳಿಸಂಕಟ
ತಡೆಯಲಾಗದ ಭಾವಾಟೋಪ

ಪ್ರೇಮ ಕಮಲವದು ಅರಳಿದೆ
ಕಂಪು ಸೂಸುತ ಹೆಸರ ಕರೆದಿದೆ
ಕಲ್ಪನೆಗಳ ತೋರಣ ಕಟ್ಟಿದೆ
ಹೃದಯ ಸಾಮ್ರಾಜ್ಯವ ಧಾರೆಯೆರೆದಿದೆ

ಚಾಂಚಲ್ಯವದು ಎಲ್ಲೆ ಮೀರಿದೆ
ಬೇಲಿ ಎದ್ದು ಹೊಲ ಮೆಯ್ದಿದೆ
ಎಡರು ತೊಡರುಗಳ ತೊರೆ ಎಂದಿದೆ
ಸ್ಥಿತಪ್ರಜ್ಞೆ ಆದೇಶ ನೀಡಿದೆ

ತುಟಿ ಬಿಗಿದು ಮಾತ ಮರೆಯೆನು
ಆಲೋಚನೆಗಳ ಕದಮುಚ್ಚೆನು
ಮನದರಸಿಯ ಓಲೈಸುವೆನು
ಬಾಳ ಪಯಣದಿ ಜೊತೆಸಾರುವೆನು.

ದೂರ ಹೋದೆಯಾ ಸತಿ

ದೂರ ಹೋದೆಯಾ ಸತಿ
ಬಿಟ್ಟು ನನ್ನನು ಏಕಾಂತದಲಿ....
ಶ್ರೀಮೊಗದಭಾಗ್ಯವತಿ
ವಿರಹಿ ನಾನಾದೆನು ಅಂತರ್ಮುಖಿ

ಹುಣ್ಣಿಮೆ ಬೆಳಕು ಕೊಳದಲ್ಲಿ ಥಳುಕು
ಕನ್ನಡಿ ನೋಡುವ ಚಂದ್ರನ ನಗುವು
ಮಂದ ತಂಗಾಳಿಗೆ ಮುಂಗುರುಳ ಆಟವು
ನಿನ್ನದೇ ನೆನಪು ಕಾಡುತ್ತಿತ್ತು

ಮೊದಲ ರಾತ್ರಿಯಲಿ ಎದೆಗೊರಗಿ
ಕೊಟ್ಟ ಭರವಸೆಗಳ ತೇಲಿಬಿಟ್ಟೆಯಾ...
ಅಗ್ನಿಸಾಕ್ಷಿಯಾಗಿ ಮಾಡಿದ ನಂಟನು
ತಾಳಿಯ ಗಂಟನು ಕಡಿದುಬಿಟ್ಟೆಯಾ...

ಆಸೆಯೆಂಬ ಮಗುವನ್ನು ಹಡೆದು
ಮಡಿಲ ತುಂಬಿಸಿ ತೊರೆದುಬಿಟ್ಟೆಯಾ...
ತೋಳತಕ್ಕೆಯ ಪ್ರೀತಿ ಬಂಧನದೀ
ಕಂಡ ಕನಸುಗಳ ಮರೆತುಬಿಟ್ಟೆಯಾ...

ಪಡಸಾಲೆಯಲ್ಲಿ ಕೇಳದು ಗೆಜ್ಜೆಸದ್ದು
ಕಡುಕಲ್ಲ ಕಡೆಯಿಂದ ಬರದು ಬಳೆಗಳ ನಾದ...
ಕಾಣದು ಹಗ್ಗದಲಿ ಸೀರೆಸರಹದ್ದು
ಅಡಿಗೆಮನೆಯಲ್ಲಿ ಮೊಳಗದು ಭಕ್ತಿರಾಗ...

ನನ್ನ ಮೇಲೆ ನಿನಗಿರುವ ಕೋಪಮನ
ಆಗಲಿ ಅದು ಕೂಡಲೆ ಶಮನ
ಅರಿತಿರುವೆ ನಾನು ಇರಲಾರೆ ನೀನು

ಅಗಲಿ ನನ್ನನ್ನು ಒಂದು ಕ್ಷಣ

ಓ ಬೇಸಾಯಗಾರ ನೀ ಬೇಗ ಸಾಯ

ಗುಡಿಸಲು ಮನೆಯ ಮಾಲಿಕ
ತುಂಡು ಭೂಮಿಯ ಒಡೆಯ
ನೇಗಿಲ ಯೋಗಿ ರೈತ
ಲೋಕಕೆ ನೀ ಅನ್ನದಾತ
ಕೇಳಿಯೂ ಕೇಳದು ನಿನ್ನಾರ್ತನಾದ

ಬೆವರಿಳಿಸಿ ದುಡಿಯುತಿರು
ಮನುಜರನು ಸಲಹಲು
ನಗಣ್ಯ ನೀನು, ನಿನ್ನ ಶ್ರಮ
ಜಗ ತಿಂದುಂಡು ಮಲಗಲು
ಓ ಬೇಸಾಯಗಾರ ನೀ ಬೇಗ ಸಾಯ

ಸರಕಾರ ಸಹಕಾರವಿಲ್ಲ
ಅಧಿಕಾರಿ ಮಾತಿನಮಲ್ಲ
ಹೊಲಕ್ಕೆ ಗೊಬ್ಬರವಿಲ್ಲ
ಬಿತ್ತಲು ಬೀಜ ಇಲ್ಲ
ಓ ಬೇಸಾಯಗಾರ ನೀ ಬೇಗ ಸಾಯ

ಕೂಲಿ ಕೊಡಲು ಶಕ್ತಿಯಿಲ್ಲ
ಕೊಟ್ಟ ಕೂಲಿ ಸಾಲೋಲ್ಲ
ಸಾಲ ಮಾಡಿ ಕೃಷಿ ಮಾಡು
ಸಾಲ ತೀರಲು ಜಮೀನು ಮಾರು
ಓ ಬೇಸಾಯಗಾರ ನೀ ಬೇಗ ಸಾಯ

ಮೂಟೆ ಭತ್ತದ ಕನಸು ಕಾಣು
ಮುನಿದ ಪ್ರಕೃತಿಯ ಪರಿಯ ನೋಡು
ಸಕಾಲಕ್ಕೆ ಮಳೆಯಿಲ್ಲ
ಫಲಕಾಲಕ್ಕೆ ಬೆಳೆಯಿಲ್ಲ
                                                                           ಓ ಬೇಸಾಯಗಾರ ನೀ ಬೇಗ ಸಾಯ

ಶುಕ್ರವಾರ, ಸೆಪ್ಟೆಂಬರ್ 3, 2010

ಮಳೆ

ಮೊದಲ ಮಳೆ, ಮುಂಗಾರಿನ ಮೊದಲ ಮಳೆ
ಅಲ್ಲಲ್ಲಿ ಹನಿಮಳೆ ಕೆಲವೆಡೆ ಜಡಿಮಳೆ
ಹಲವೆಡೆ ಸುರಿದ ಸುರಿಮಳೆ
ಧೋ ಎಂದೊದರಿದ ಧಾರಾಕಾರ ಮಳೆ




ಸಿಡಿಲ ಒಡಳೊಳಗಿಂದ ಗುಡುಗುಮಳೆ
ಮಾರುತದೊಡಗೂಡಿ ಬಡಿದ ಭಾರೀಮಳೆ
ಇಳೆಯ ಕೊಳೆತೊಳೆದ ಪಾವನ ಮಳೆ
ಹಸಿರ ಹರಸಿದ ಮಾತೃಮಳೆ

ಯುವಪ್ರೇಮಿಗಳಿಗೆ ಪ್ರೀತಿಮಳೆ
ನವದಂಪತಿಗೆ ಮಧುಮಳೆ
ಮಣ್ಣಮಕ್ಕಳಿಗೆ ಅನ್ನಮಳೆ
ಸರಕಾರಿ ಬಾಬೂಗೆ ರಗಳೆಮಳೆ

ನರೆಯ ಹಿರಿಯರಿಗೆ ದೇವಿಮಳೆ
ಹಳ್ಳಿಮಂದಿಗೆ ಉಸಿರುಮಳೆ
ನಗರವಾಸಿಗರಿಗೆ ಬೇಜಾರು ಮಳೆ
ಕುರುಕು ತಿನ್ನಲು ಬೇಕು ಮಳೆ

ಪುಂಡರ ಕಾಲ್ಚೆಂಡಾಟಕೆ ಮಳೆ
ಹೆಂಗಳೆಯರ ಚನ್ನೆಮಣೆ ಕೂಟಕೆ ಮಳೆ
ಸೋಮಾರಿಯ ಹಗಲ ನಿದ್ದೆಗೆ ಮಳೆ
ಮೊದಲ ಮಳೆ, ಮುಂಗಾರಿನ ಮೊದಲಮಳೆ

Whispers of Stolen Identities

In the dance of glances, a meeting divine, A thrill coursing through like sweet-aged wine. Dignity lost, identity taken away, Yet joy persis...