ಗುರುವಾರ, ನವೆಂಬರ್ 17, 2011

ಕಾಡು ಚಿರತೆ ನಾಡಿಗೆ ಬಂದಿತ್ತಾ


ಕಾಡು ಚಿರತೆ ನಾಡಿಗೆ ಬಂದಿತ್ತಾ
ಕುರಿಕುನ್ನಿಗಂಟಿಯ ನುಂಗಿತ್ತಾ
ಊರ ಸೇರೋ ಕಾಡುದಾರಿ
ನಡುಮದ್ಯ ಹಾದಿಯಲ್ಲಿ
ಶಬ್ದ ಕೇಳದ ನೀರವದಲ್ಲಿ
ನೆತ್ತಿ ಮೇಲೆ ಸೂರ್ಯ ಹತ್ತಿ
ಧರೆಗೆ ನೆರಳ ಜಡೆಯ ಸುತ್ತಿ
ನಿಂತ ವನದ ಗೆಲ್ಲಿನಿಂದ
ಬೇಟೆಗಾಗಿ ಹೊಂಚು ಹಾಕಿತ್ತಾ (ಪಲ್ಲವಿ)
ಬೆಂಕಿಕೆಂಡ ಹೊತ್ತ ಮೈಯ
ಉದ್ದಕ್ಕುದ್ದ ಬಾಗಿದ ಬಾಲ
ಸಣ್ಣ ಕಿವಿನೇರ ಕಣ್ಣ
ಕೋಲ್ಮಿಂಚಲೆ ಹೂಡಿ ಸಂಚ
ನೀಟು ಮೀಸೆ ಗಲ್ಲಸೆಟೆದು
ಚೂಪು ಈಟಿ ದವಡೆ ಮಿರಿದು
ಕೊಕ್ಕೆ ನಖದಿ ಟೊಂಗೆ ಕೆರೆದು
ಕವಣೆ ಕಲ್ಲು ಬಿಟ್ಟ ಹಾಂಗ
ತಪ್ಪದ ಗುರಿ ಹೊಂಚಿನ ಮೇಲೆಗರಿತ್ತಾ (೧)
ಪುಷ್ಟಕಾಲು ಸ್ಪಷ್ಟಓಟ
ದಷ್ಟಬಲಿಷ್ಠ ಖಂಡಮಾಂಸ
ಹೊತ್ತು ಇಳಿದು ಗ್ರಾಮ ತಲುಪಿ
ಹಟ್ಟಿಹೊಕ್ಕು ಪ್ರಾಣ ಕೆಡವಿ
ಬಡ ಬದುಕ ರಕ್ತಹೀರಿ
ಮುದದಿ ಕುಣಿದು ಸೊಕ್ಕೇರಿ
ಹೋಗ್ವೆನೆಂದು ನೆನೆದು ತಿರುಗಿ
ಏರಿಹಾರಿ ದಾರಿ ಮರೆತು
ಕಾಲು ಜಾರಿ ಖಾಲಿ ಬಾವಿಗೆ ಬಿದ್ದಿತ್ತಾ (೨)
ಜಾತ್ರೆ ನೆರೆದ ಬಾವಿಹತ್ರ
ದಿಗಿಲೇರಿದ ಕೂಗಾಟ
ನೂರು ನೇತ್ರ ತಿವಿದ ನೋಟ
ಕೈಯ ಬೆರಳ ಸಂಜ್ಞೆಯಾಟ
ಕಂಡಿತ್ತ ಗಲಿಬಿಲಿಗೊಂಡಿತ್ತ
ಬಲೆ ಇಳಿಸಿ ಮೇಲಕ್ಕೆತ್ತಿ
ಬಂಧಿಮಾಡೋ ಮಂದಿಗ್ಹೆದರಿ
ಬರಿದುಮಾಡಿ ಛಂಗನೆಗೆದು
ಓಟಕ್ಕಿತ್ತ ಕಾಡೊಳು ಮರೆಯಾಗಿತ್ತಾ (೩)

ಶನಿವಾರ, ಅಕ್ಟೋಬರ್ 29, 2011

ಹಣತೆ ನೀನಾಗಿರಲು

ಹಣತೆ ನೀನಾಗಿರಲು
ಅರಳೆ ನಾನಾಗುವೆ
ಉರಿಬೆಂಕಿಯಲುರಿದು
ಲೋಕ ಬೆಳಗುವೆ

ಮರವು ನೀನಾಗಿರಲು
ನೆರಳು ನಾನಾಗುವೆ
ದಣಿದು ಬಳಿದುದಕೆ
ತಂಪು ನೀಡುವೆ

ನದಿ ನೀನಾಗಿರಲು
ಪ್ರವಾಹ ನಾನಾಗುವೆ
ಹಾದಿ ಕೊರೆಯುತಾ
ಗುರಿ ಸೇರುವೆ

ಮೋಡ ನೀನಾಗಲು
ಮಳೆ ನಾನಾಗುವೆ
ಧರೆಯ ಒಡಲಿಗೆ
ವೃಷ್ಟಿ ಹರಿಸುವೆ

ಕಿನ್ನರಿ ನೀನಾಗಲು
ನಾದ ನಾನಾಗುವೆ
ಭಾವ ಜೀವನ
ಗೀತೆ ಹಾಡುವೆ

ಸಮಯ ನೀನಾಗಿರಲು
ಕ್ಷಣ ನಾನಾಗುವೆ
ಕ್ಷಣ-ಕ್ಷಣ ಕಲೆತು
ಕಾಲಾನಂತ ತಲುಪುವೆ

ದೇಹ ನೀನಾಗಿರಲು
ಆತ್ಮ ನಾನಾಗುವೆ
ಆತ್ಮ ಬೆಳಗಿ
ಜ್ಞಾನ ನೀಡುವೆ

ಚೆಲುವು ನೀನಾಗಿರಲು
ಹರೆಯ ನಾನಾಗುವೆ
ಸೃಷ್ಟಿ ಸಂಪೂರ್ಣ
ಎರಡೂ ಮೇಳೈಸಿದಾಗಲೆ 

ಗುರುವಾರ, ಆಗಸ್ಟ್ 18, 2011

ನಾವಿಕ

ಕರೆಯದೆ ಬಂದೆಯ ಅಥಿತಿ ತಿಳಿದಿದು ಬೆರಗಿನ ಅರಮನೆ
ದೂರದ ಅರಮನೆ ಒಳ ಇಣುಕಲು ಅರಗಿನ ಸೆರೆಮನೆ
ತಿಮಿರ ತಿವಿದ ಗುಂಡಿಗೆ ಕಾಣದು ಜ್ಯೋತಿಯ ಜ್ವಾಲೆ
ಅಸದಳ ಚಿಂತೆ ದೌರ್ಬಲ್ಯಗಳ ತರಹೇವಾರು ಬೇನೆ

ಶಾಂತಿಯ ಅರಸೆ ದೂರಹೋಯಿತೆಲ್ಲಿ
ನೆಮ್ಮದಿಯ ಬಯಸೆ ಕಾಣದಾಗಿದೆ ಇಲ್ಲಿ
ತುಂಬು ಓ ಚೈತನ್ಯ ನನ್ನ ಆತ್ಮದಲ್ಲಿ
ಜ್ಞಾನ ದೀಪ ಉರಿಯಲಿ ಮನಸಿನರಿವಿನಲ್ಲಿ

ಬಲಹೀನತೆ ನನ್ನಿದಿರು ನಡುಬಗ್ಗಿ ನಡೆಯಲಿ
ಮಂಕುಮುಸುಕು ವಿಳಾಸಿಸದೆ ಬೆಂಗೊಟ್ಟೋಡಲಿ
ಮಾಲಿಕನೆ ಬರೆಯುವೆ ಸರ್ವಸ್ವ ನಿನ್ನ ಹೆಸರಲಿ 
ಇರಲು ಅಭಯ ಮಹಿಮನ ನಾಮ ಮಹಿಮೆಯಲಿ

ಬತ್ತಿದ ಅಕ್ಷಿಬಟ್ಟಲುಗಳಿವೆ ಕಣ್ಣೀರನು ತುಂಬುವೆಯಾ
ಮೃತಿ ಹೊಂದಿದೆ ಅಂತರಂಗ ಜೀವಬರಿಸುವೆಯಾ
ಕಣ್ಣಾಲಿಗಳು ತುಂಬಿಹರಿಯಲಿ ಉಕ್ಕಿಬರಲು ಹೃದಯ
ದಡ ಸೇರಿಸೋ ನಾವಿಕನೆ ಹತ್ತಿಹೆ ನಿನ್ನ ನಾವೆಯ 

ಸೋಮವಾರ, ಜುಲೈ 25, 2011

ನೀ ಬಂದೆ



ದಿಗಂತದಲಿ ಭುವಿಬಾನ ತಬ್ಬುವಂತೆ
ಕತ್ತಲೆ ನೀಗುವ ಬೆಳಕಿನ ಸ್ಪುರಣದಂತೆ
ನೆಲವ ನೆನೆವ ಬೆಳಗಿನ ಇಬ್ಬನಿಯಂತೆ
ಬರಡು ಹೃದಯಕೆ ಕುರುಡು ಜೀವಕೆ
ನೀ ಬಂದೆ, ಭಾವ ಲಹರಿಯಾಗಿ ನೀ ಬಂದೆ

ಗುರಿಪರಿಚಯ ಇಲ್ಲದ
ಸಾಧನೆ ಪರಿಶ್ರಮ ಇಲ್ಲದ
ಅಸಹನೀಯ ನಿರಾಶಾದಾಯಕ
ಜಡಜೀವಕೆ ಒಡನಾಡಿಯಾದ
ನೀ ಬಂದೆ, ಸಾಫಲ್ಯದ ಸೆಲೆಯಾಗಿ ನೀ ಬಂದೆ

ದುಃಖ-ದುಮ್ಮಾನ, ಅವಹೇಳನವ ಬದಿಗೊತ್ತಿ
ಚಿಂತೆ-ಆಲಸ್ಯ, ಕುಹಕ ಮಾತನು ಮೆಟ್ಟಿ
ಹೇಳುವೆನು ವಿಜಯಿ ಎಂದು ಎದೆತಟ್ಟಿ
ಇರುವಾಗ ಜೊತೆಯಾಗಿ, ನೀ ಬಲವಾಗಿ



ಮಂಗಳವಾರ, ಜುಲೈ 5, 2011

ವಸಂತ


ಹನಿ ಮಂಜಲಿ ತೊಯ್ದ ಸಸ್ಯಸಂಕುಲ
ಸಜ್ಜಾಯಿತು ಉಟ್ಟು ಹಸಿರುಡುಗೆ
ದನಿಯಾಯಿತು ಕೋಗಿಲೆ ಅರುಣೋದಯ ರಾಗಕೆ
ಸ್ವಾಗತ ಕೋರಿತು ವಸಂತಾಗಮನಕೆ

ಆಸರೆ ಅರಸಿ ಮರವನಪ್ಪಲು ಲತೆಯು
ಗೆಲುವ ಕಂಡಿತು ಒತ್ತಾಗಿ ಕಲೆತು
ಕಾವೇರಲು ತನುವು ಅರಳಿತು ಮನವು
ಮಿಡಿಯುವ ಆಸೆಗೆ ಬಯಸುತ ಒಲವು

ನಗು ಮೊಲ್ಲೆ ಮೊಗ್ಗು ಚೆಲ್ಲಲು ಸುಗಂಧವನು
ತಂಗಾಳಿ ಬೀಸಿ ಪಸರಿತು ಅನುರಾಗವನು
ಸನಿಹ ಬಳಸಿ ಭಾವ ತಿಳಿಸೆ ನಾಚಿ ನೀರಾಗಲು ನೀನು
ಆ ನೀರ್ಗೊಳದಲಿ ಮಿಂದ ಹಂಸ ನಾನು

ಅರಳಿದ ಹೂವ ಹರೆಯದ ಯವ್ವನ
ಮಧು ಪಕಳೆಯ ಚುಂಬಿಸಿ ಮತ್ತಾಯಿತು ಭ್ರಮರ
ನಾ ಕಳೆದು ಹೋದೆ ನಿನ್ನಳೊಂದಾಗಿ
ತುಂಬು ಒಲವಲಿ ಸವಿದೆ ಅಮೃತ ಅಮರ

ಹೊಳೆವ ಇರುಳಲಿ ನಲಿವ ಚೆಲುವ ನೈದಿಲೆ
ಮರೆತು ಬಿಟ್ಟಿತೆ ಬೆಳದಿಂಗಳ ಸಂಗವನು ?
ಪ್ರತಿವರುಷವು ಹರುಷದ ಹೊಸ ಹೊನಲು ಹರಿಸುತಿರಲು 
ವರುಷ ವರುಷವೂ ಕಾಯುತಿರುವೆ ನಿತ್ಯ ವಸಂತವನು.

ಶನಿವಾರ, ನವೆಂಬರ್ 6, 2010

ಮುಂಜಾನೆ ಹೋಳಿ

ಮುಂಜಾನೆ ಹೋಳಿ ಅಂಬರ ತುಂಬಿತು
ಬಣ್ಣದ ಮೆರುಗು ಸೊಬಗ ತದಿಂತು
ಮೂಡಣ ರವಿಯು ನಡುವಲಿ ನಕ್ಕಾಗ
ಚಿಲಿಪಿಲಿ ಪಕ್ಕಿ ಬಾನಿಗೆ ನೆಗೆದಾವು (ಪಲ್ಲವಿ)

ಅಂಗಳದಲಿ ರಂಗೋಲಿ ರಂಗು
ಗುಡ್ದದ ಗುಡಿಯಲಿ ಘಂಟೆಯ ಸದ್ದು
ಭಕ್ತಿಯ ಆರತಿ ಭಾಗ್ಯದ ತುಳಸಿಗೆ
ಲೋಕದ ಲಾಲನೆ ಉದಯದ ಉಗಮಕೆ

ತರುಲತೆಗಳ ಹೊಕ್ಕ ಕಿರಣವು
ಕಿಟಕಿಯ ತೂರಿ ಒಳಗಡಿ ಇಟ್ಟಿತು
ಪಸರಿತು ಗಾಳಿಗೆ ಹೂಗಳ ಕಂಪು
ಮನೆಯೊಳಗೆಲ್ಲಾ ಆನಂದ ತಂತು

ಹಳ್ಳಿಯ ಹೆಣ್ಣು ಸೇಬು ಹಣ್ಣು
ಬಿಂದಿಗೆ ಹಿಡಿದು ನೀರಿಗೆ ಹೊರಟಳು
ಗೆಜ್ಜೆಯ ಝಲ್ ಝಲ್ ನಾದವು ಕೇಳಲು
ಬೀದೀಲಿ ಹೈದರು ಕಣ್ ಕಣ್ ಬಿಟ್ಟರು

ರೈತಯೋಗಿಯ ಶ್ರಮೆಯನು ಉಂಡು
ದಣಿಯದೆ ದುಡಿಯುವ ಯುವಕರ ದಂಡು
ಶಾಲೆಗೆ ತೆರಳುವ ಮಕ್ಕಳ ಹಿಂಡು
ಹಿಗ್ಗುವ ಹಿರಿಯರು ಭವಿಷ್ಯವ ಕಂಡು

ಸೋಮವಾರ, ನವೆಂಬರ್ 1, 2010

ನಿಯಮ




ಸೃಷ್ಟಿ ವೈಚಿತ್ರ್ಯ ನಿಯಮ
ಸೃಷ್ಟಿ ವೈವಿಧ್ಯ ನಿಯಮ
ತರ್ಕ ನಿಲುಕದ ನಿಯಮ
ಆಧ್ಯಾತ್ಮಕೆ ಪ್ರೇರಣೆ ನಿಯಮ

ಪರಮಾತ್ಮನಲ್ಲಿನ ನಿಯಮ
ಪರಮಾತ್ಮನ ನಿಯಮ
ಪರಮಾತ್ಮನೆ ನಿಯಮ
ಪಂಚಭೂತದಲಿ ಲೀನ ನಿಯಮ


ಜೀವಸಂಕುಲಗಳ ಸೃಷ್ಟಿಸೋ ನಿಯಮ
ಗಗನಮಂಡಲ ವೈಭವತೆಯ ನಿಯಮ
ತೆರೆ ಅಬ್ಬರದ ಶರಧಿಯಲಿ ನಿಯಮ
ಧುಮುಕೋ ಜಲಪಾತದಲಿ ನಿಯಮ

ಋತುಚಕ್ರಗಳೆಂಬ ನಿಯಮ
ಅತಿವೃಷ್ಟಿಯ ತಂದ ನಿಯಮ
ಅನಾವೃಷ್ಟಿಯೊಳು ಕಂಡ ನಿಯಮ
ಸರ್ವತ್ರ ವ್ಯಾಪ್ತ ನಿಯಮ

ಲೋಕ ಪರಿಪಾಲಿಸುವ ನಿಯಮ
ನ್ಯಾಯನೀತಿಯ ಮುಂದೆ ನಿಯಮ
ಅನೀತಿ ಅನಾಚಾರಗಳ ಹಿಂದೆ ನಿಯಮ
ಮನುಜ ನಾಗರಿಕತೆಗೆ ಸಂಕೇತ ನಿಯಮ

ಸುಖ ಸಮೃದ್ಧಿಗೆ ಕಾರಣ ನಿಯಮ
ದಟ್ಟದಾರಿದ್ರ್ಯವನು ತರುವ ನಿಯಮ
ಆರೋಗ್ಯಭಾಗ್ಯ ಕೊಡುವ ನಿಯಮ
ಪೀಡೆ-ಪಿಶಾಚವೆನುವ ಹೆಸರಿನ ನಿಯಮ

ಶಿಷ್ಟ ಸೋತ ನಿಯಮ
ದುರುಳ ಗೆದ್ದ ನಿಯಮ
ಅಂತಃಕಲಹ, ರಾಜಿಯ ನಿಯಮ
ಬದುಕಲಿ ಸಮರಸ ಸಾಧಿಸುವ ನಿಯಮ

Whispers of Stolen Identities

In the dance of glances, a meeting divine, A thrill coursing through like sweet-aged wine. Dignity lost, identity taken away, Yet joy persis...