ಕಾಡು ಚಿರತೆ ನಾಡಿಗೆ ಬಂದಿತ್ತಾ
ಕುರಿಕುನ್ನಿಗಂಟಿಯ ನುಂಗಿತ್ತಾ
ಊರ ಸೇರೋ ಕಾಡುದಾರಿ
ನಡುಮದ್ಯ ಹಾದಿಯಲ್ಲಿ
ಶಬ್ದ ಕೇಳದ ನೀರವದಲ್ಲಿ
ನೆತ್ತಿ ಮೇಲೆ ಸೂರ್ಯ ಹತ್ತಿ
ಧರೆಗೆ ನೆರಳ ಜಡೆಯ ಸುತ್ತಿ
ನಿಂತ ವನದ ಗೆಲ್ಲಿನಿಂದ
ಬೇಟೆಗಾಗಿ ಹೊಂಚು ಹಾಕಿತ್ತಾ (ಪಲ್ಲವಿ)
ಬೆಂಕಿಕೆಂಡ ಹೊತ್ತ ಮೈಯ
ಉದ್ದಕ್ಕುದ್ದ ಬಾಗಿದ ಬಾಲ
ಸಣ್ಣ ಕಿವಿನೇರ ಕಣ್ಣ
ಕೋಲ್ಮಿಂಚಲೆ ಹೂಡಿ ಸಂಚ
ನೀಟು ಮೀಸೆ ಗಲ್ಲಸೆಟೆದು
ಚೂಪು ಈಟಿ ದವಡೆ ಮಿರಿದು
ಕೊಕ್ಕೆ ನಖದಿ ಟೊಂಗೆ ಕೆರೆದು
ಕವಣೆ ಕಲ್ಲು ಬಿಟ್ಟ ಹಾಂಗ
ತಪ್ಪದ ಗುರಿ ಹೊಂಚಿನ ಮೇಲೆಗರಿತ್ತಾ (೧)
ಪುಷ್ಟಕಾಲು ಸ್ಪಷ್ಟಓಟ
ದಷ್ಟಬಲಿಷ್ಠ ಖಂಡಮಾಂಸ
ಹೊತ್ತು ಇಳಿದು ಗ್ರಾಮ ತಲುಪಿ
ಹಟ್ಟಿಹೊಕ್ಕು ಪ್ರಾಣ ಕೆಡವಿ
ಬಡ ಬದುಕ ರಕ್ತಹೀರಿ
ಮುದದಿ ಕುಣಿದು ಸೊಕ್ಕೇರಿ
ಹೋಗ್ವೆನೆಂದು ನೆನೆದು ತಿರುಗಿ
ಏರಿಹಾರಿ ದಾರಿ ಮರೆತು
ಕಾಲು ಜಾರಿ ಖಾಲಿ ಬಾವಿಗೆ ಬಿದ್ದಿತ್ತಾ (೨)
ಜಾತ್ರೆ ನೆರೆದ ಬಾವಿಹತ್ರ
ದಿಗಿಲೇರಿದ ಕೂಗಾಟ
ನೂರು ನೇತ್ರ ತಿವಿದ ನೋಟ
ಕೈಯ ಬೆರಳ ಸಂಜ್ಞೆಯಾಟ
ಕಂಡಿತ್ತ ಗಲಿಬಿಲಿಗೊಂಡಿತ್ತ
ಬಲೆ ಇಳಿಸಿ ಮೇಲಕ್ಕೆತ್ತಿ
ಬಂಧಿಮಾಡೋ ಮಂದಿಗ್ಹೆದರಿ
ಬರಿದುಮಾಡಿ ಛಂಗನೆಗೆದು
ಓಟಕ್ಕಿತ್ತ ಕಾಡೊಳು ಮರೆಯಾಗಿತ್ತಾ (೩)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ