ಶನಿವಾರ, ಏಪ್ರಿಲ್ 21, 2012

ಹೊಂಗೆಹೂವು ಮಾವು ಚಿಗುರು

ಹೊಂಗೆಹೂವು ಮಾವು ಚಿಗುರಿದೆ 
ಚೈತ್ರಯುಗಾದಿಯ ಸಡಗರಾರಂಭಕೆ 
ನಾಜೂಕಿನಲಿ ಪ್ರಕೃತಿಯು ಚೆಲುವನ್ನು ಹರವಿದೆ  
ಲಜ್ಜೆಯ ವಧುವಿನಂತೆ 

ನೋಡಿರಿ ಮನ್ಮಥನ ಗೆಳೆಯನನು
ಹೂಡಿ ನಿಂತಿಹನು ಹೂಬಾಣವನು
ಕಾಮನೆಗಳ ಕೋಡಿ ಹರಿಯಲು
ಕಾಣಿರಿ ಮದನೋತ್ಸವದ ಲವಲವಿಕೆಯನು

ಎಣ್ಣೆಯ ಜಳಕಮಾಡಿ ಹೊಸದಿರಿಸು ಧರಿಸುವರು 
ದೇವ ದೇವಿಯರ ನಮಿಸುವರು 
ಸಂತಸ ಸಿಂಚನ ಸಂಚಾರದಲಿ
ಭಕ್ಷ-ಭೋಜನಗಳ ಹಂಚಿ ಸಂಭ್ರಮಿಸುವರು 

ಹಬ್ಬಹರಿದಿನಗಳ ಆರಂಭವು 
ಜಾತ್ರೆಗಳ ಅನುರಣನವು
ನವ ಯೋಚನೆ ಯೋಜನೆಗಳಿಗೆ ಸಕಾಲವು 
ಆರಂಬಗಾರನಿಗೆ ಗದ್ದೆಗಿಳಿಯುವ ತವಕವು

ಬೇವು-ಬೆಲ್ಲಧ್ಯೋತಕ ಜೀವನ
ಸಾಗರಯಾನದಲಿ ಸಿಹಿಕಹಿಗಳನುಕ್ರಮಣಿಕೆ
ಹೊಸವರುಷದ ರಾಗರಸ ಮಾಮರದಲಿದೆ
ಕೋಗಿಲೆ ಹಾಡಿದೆ ವಂದನೆ ವಸಂತಮಾಸಕೆ


ಸೋಮವಾರ, ಏಪ್ರಿಲ್ 16, 2012

ಬದುಕು-ಗರಿಕೆ

ಬದುಕು ಹುಲ್ಲಂತೆ ಗರಿಕೆ ಹುಲ್ಲಂತೆ
ನೀರ ಒಸರಿನ ಹಿಡಿದು ವಾಸನೆ 
ಬೆಳೆಯಿತು ಕಂಡಲ್ಲಿ ಬಂಡೆಯೆಡೆಯಲ್ಲಿ
ಹೆಂಚ ಮಾಡಲ್ಲಿ, ಸಂದುಗೊಂದಲ್ಲಿ

ಅವಕಾಶವಿರುವಲೆ ಬಿಟ್ಟು ಕೊರಗಬೇಡ
ವಿಶಾಲ ಪ್ರಪಂಚದಲನಂತ ಅವಕಾಶ
ನೆಲೆನಿಲ್ಲು ತಳವೂರು ಸಿಕ್ಕಲ್ಲಿ
ಭರವಸೆಯಿರಲಿ ಚಿರಂಜೀವಿಯಲ್ಲ ನೀನಿಲ್ಲಿ

ಭೀಕರ ಬರದಂತೆ ಬಿಸಿಲ ಝಳಪು
ಪಸೆ ಆವಿಯಂತೆ ಮುಗಿಲೇರಿತು
ಗರಿಕೆ ಬಾಡಿತು ಒಣಗಿ ಕರಟಿತು
ಆಶಿಸಿ ಮಳೆಯ ತಿರುಗಿ ಚಿಗುರಲು

ಕಷ್ಟಕೋಟಲೆಗಳು ಕಾಲನಿಯಮಗಳು
ಸಾಮಂಜಸ್ಯ ಬದುಕಿನ ಮೂಲನಿರ್ಣಯಗಳು
ನಿರಂತರವಲ್ಲ ಇರುಳು ದುಡುಕದಿರು ಸ್ವಲ್ಪತಾಳು
ಅಳಿವುಉಳಿವಿನಂಚಿನಲ್ಲಿ ಕೊಂಚಕಾಯು

ಹಿಂದಿರುವರ ಮುಂಬಲವಾಗು ಮುಂದಡಿಯಿಡಲು
ನೆರವಾಗು, ನಿನಗೂ ಪರರಿಗೂ ಉದಾರಿಯಾಗು
ಸೀಮೆ ಮೀರಿದ ಬಾನಿಗೆ ತೆರದ ಗರಿಕೆ
ಮೇವು ನೀಡಿತು ಜೀವಜಗಕೆ

Whispers of Stolen Identities

In the dance of glances, a meeting divine, A thrill coursing through like sweet-aged wine. Dignity lost, identity taken away, Yet joy persis...